ಪ್ರಶ್ನೆ 75. ಪ್ರೀತಿಯ ಗುರುದೇವ, ಜೀವನದಲ್ಲಿ ನನಗೆ ಅನೇಕ ಬಾರಿ ಆತ್ಮಹತ್ಯೆಯ ಆಲೋಚನೆಗಳು ಬಂದಿದೆ. ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಏನಾಗುತ್ತದೆ?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಆತ್ಮಹತ್ಯೆ ಎನ್ನುವುದು ಒಬ್ಬ ವ್ಯಕ್ತಿಯು ಮಾಡಬಹುದಾದ ಅತ್ಯಂತ ಮೂರ್ಖ ಕೆಲಸ.

ಈಗ ಯಾರಾದರೂ ಚಳಿಯಲ್ಲಿ ನಡುಗುತ್ತಿದ್ದು, ಅವರು ಕೋಣೆಯಿಂದ ಹೊರ ಹೋಗಿ ತಮ್ಮ ಬಟ್ಟೆಗಳನ್ನೆಲ್ಲ ತೆಗೆದು ಹಾಕಿದರೆ, ಅವರನ್ನು ಏನೆನ್ನುತ್ತೀರಿ? ಮೂರ್ಖ ಎಂದಲ್ಲವೇ!

ಬೆಚ್ಚಗಿರುವ ಸಭಾಂಗಣದಲ್ಲಿ ಇದ್ದುಕೊಂಡೇ ನೀವು ಚಳಿಯನ್ನು ಅನುಭವಿಸುತ್ತಿದ್ದರೆ, ಮತ್ತೆ ಅದರಿಂದ ಹೊರಗಡೆ ಹೋಗಿ, ‘ನನಗೆ ತುಂಬಾ ಚಳಿಯಾಗುತ್ತಿದೆ’ ಎಂದು ಹೇಳುತ್ತಾ ನಿಮ್ಮ ಜಾಕೆಟ್, ಟೀ ಶರ್ಟ್ ಮತ್ತು ಒಳ ಉಡುಪುಗಳನ್ನು ತೆಗೆದುಹಾಕಿದರೆ, ಚಳಿ ಕಡಿಮೆಯಾಗುವುದೇ? ಖಂಡಿತ ಇಲ್ಲ!

ಆತ್ಮಹತ್ಯೆ ಮಾಡಿಕೊಳ್ಳುವ ಜನರು, ತಮ್ಮನ್ನು ತಾವು ಆ ಪರಿಸ್ಥಿತಿಯಲ್ಲಿ ಏಕೆ ಕಂಡುಕೊಳ್ಳುತ್ತಾರೆ ಎಂದರೆ, ಅವರು ಜೀವನಕ್ಕೆ ತುಂಬಾ ಅಂಟಿಕೊಂಡಿರುತ್ತಾರೆ, ಸುಖಕ್ಕೆ ಹೊಂದಿಕೊಂಡಿರುತ್ತಾರೆ. ಬಯಕೆಗಳಿಗೆ, ಸಂತೋಷಕ್ಕೆ ಅತಿಯಾಗಿ ಅಂಟಿಕೊಂಡಿರುತ್ತಾರೆ. ಇದರಿಂದ ಅವರು ತಮ್ಮನ್ನು ತಾವೇ ಕೊಂದುಕೊಳ್ಳುವ ಮಟ್ಟಕ್ಕೆ ಹೋಗುತ್ತಾರೆ ಮತ್ತು ಹೀಗೆ ಮಾಡುವುದರಿಂದ ತಮ್ಮನ್ನು ಇನ್ನಷ್ಟು ದೊಡ್ಡ ಸಂಕಷ್ಟದಲ್ಲಿ ದೂಡಿಕೊಳ್ಳುತ್ತಾರೆ.

ಆದರೆ ಆತ್ಮಹತ್ಯೆಯ ನಂತರ ಅವರಿಗೆ ಅನಿಸುವುದೇನೆಂದರೆ ‘ಓ ದೇವರೇ, ನನ್ನೊಳಗೆ ಇಂತಹ ತೀವ್ರವಾದ ಸಂಕಟವನ್ನು ಸೃಷ್ಟಿಸಿದ ಈ ಚಡಪಡಿಕೆ, ಆಸೆಗಳು ಇನ್ನೂ ಹೋಗಿಲ್ಲ. ನನ್ನ ದೇಹ ಮಾತ್ರ ಹೋಗಿದೆ ಆದರೆ ಸಂಕಟ ಹಾಗೇ ಉಳಿದಿದೆ’ ಎಂದು.

ದೇಹದ ಮೂಲಕ ಮಾತ್ರವೇ ಸಂಕಟವನ್ನು ಹೋಗಲಾಡಿಸಬಹುದು ಮತ್ತು ದುಃಖವನ್ನು ತೊಡೆದುಹಾಕಬಹುದು. ಆದರೆ, ಅದರ ಬದಲಾಗಿ, ಸಂಕಟವನ್ನು ತೊಡೆದುಹಾಕುವ ಉಪಕರಣವನ್ನೇ ನೀವು ನಾಶಪಡಿಸುತ್ತೀರಿ. ಅದಕ್ಕಾಗಿಯೇ ಜ್ಞಾನವು ತುಂಬಾ ಮುಖ್ಯವಾಗುತ್ತದೆ.

ಪ್ರಾಣಾಯಾಮ, ಸುದರ್ಶನ ಕ್ರಿಯ ಮತ್ತು ಧ್ಯಾನವನ್ನು ಮಾಡಿದಾಗ ನಿಮಗೆ, ನೀವು ಕೇವಲ ಈ ದೇಹವಲ್ಲ ಎಂಬ ಅರಿವಾಗುತ್ತದೆ.

ಉನ್ನತವಾದ ಉದ್ದೇಶಕ್ಕೆ ನಿಮ್ಮ ಜೀವನವನ್ನು ಅರ್ಪಿಸಿ

ನೀವು ಜೀವನದಲ್ಲಿ ಯಾವುದಕ್ಕಾಗಿ ಹಾತೊರೆಯುತ್ತಿದ್ದೀರಿ? ನೀವು ಪ್ರೀತಿಗಾಗಿ ಹಾತೊರೆಯುತ್ತೀರಾ? ಇತರರ  ಗಮನಕ್ಕಾಗಿಯೇ? ಹಣ? ಸಂತೋಷ? ನೀವು ಬಯಸುತ್ತಿರುವುದು ಯಾವುದನ್ನು? ನಿಮ್ಮ ಈ ಹಾತೊರಿಕೆಯೇ ಕುದಿಯುವ ಆಸೆಗಳಾಗುತ್ತವೆ ಮತ್ತು ಅದೇ ನಿಮ್ಮೊಳಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೂರ್ಖ ಕಲ್ಪನೆಯನ್ನು ಸ್ಪುರಿಸುತ್ತದೆ. ನಿಮಗೆ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನಿಸಿದರೆ, ನಾವು ನಿಮಗೆ ಹೇಳುವುದೇನೆಂದರೆ, ನನಗೆ ನೀವು ಬೇಕು. ನನ್ನ ಕೆಲಸವನ್ನು ನೀವು ಮಾಡಬೇಕಾಗಿದೆ, ಆದಕ್ಕಾಗಿ ಉಳಿದುಕೊಳ್ಳಿ. ಸಮಾಜದ ಒಳಿತಿಗೆ ನಿಮ್ಮ ಜೀವನವನ್ನು ಅರ್ಪಿಸಿ. ಒಂದು ಹಿರಿದಾದ ಉದ್ದೇಶಕ್ಕೆ ಜೀವನವನ್ನು ಮುಡಿಪಾಗಿಡಿ.

ಕೇವಲ ‘ನಾನು, ನಾನು, ನನಗೆ ಅದು ಬೇಕು, ಇದು ಬೇಕು’ ಎಂದು ನಿಮ್ಮ ಬಗ್ಗೆ ಮಾತ್ರ ನೀವು ಯೋಚಿಸುತ್ತಿರುವಾಗ ಖಿನ್ನತೆ ಸಾಧಾರಣವಾಗಿ ಬರುತ್ತದೆ. ನಿಮ್ಮ ಬಗ್ಗೆ ಮರೆತುಬಿಡಿ. ಒಂದು ಉನ್ನತವಾದ ಕಾರಣಕ್ಕಾಗಿ ಬೇಕಾದರೆ ಸಾವನ್ನಪ್ಪಿ, ಆದರೆ ನಿಮ್ಮನ್ನು ಕೊಂದುಕೊಳ್ಳಬೇಡಿ. ಉನ್ನತವಾದದ್ದಕ್ಕಾಗಿ ನಿಮ್ಮ ಜೀವನವನ್ನು ಅರ್ಪಿಸುವುದು ಯೋಗ್ಯವಾಗಿದೆ.

ನಮಗೆ ನೀವು ಬೇಕು. ಇಲ್ಲಿಗೆ (ಆಶ್ರಮಕ್ಕೆ) ಬಂದು ಕೆಲಸ ಮಾಡಿ. ಇಲ್ಲಿ ಮಾಡಬೇಕಾದ ಕೆಲಸಗಳು ತುಂಬಾ ಇವೆ, ನನಗೆ ಸಹಾಯ ಮಾಡಿ. ನೀವು ನನಗೆ ಉಪಯುಕ್ತವಾದವರೆಂದು ತಿಳಿಯಿರಿ.

ನೀವು ನಿಷ್ಪ್ರಯೋಜಕರೆಂದು ಯಾರಾದರೂ ಹೇಳಿದರೆ, ನೆನಪಿಡಿ, 'ಇಲ್ಲ, ಗುರುದೇವರಿಗೆ ನನ್ನ ಅವಶ್ಯಕತೆ ಇದೆ, ಆದ್ದರಿಂದಲೇ ನಾನು ಈ ಸಮಯದಲ್ಲಿ ಜನಿಸಿದ್ದೇನೆ. ಗುರುದೇವರಿಗಾಗಿ ನನ್ನಿಂದ ಕೆಲಸವಾಗುವುದಿದೆ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ', ಎಂದು. ತಿಳಿಯಿತೇ?! ಆದ್ದರಿಂದ, ನನ್ನ ಕೆಲಸವನ್ನು ಮಾಡಿ.

ನಿಮಗೆ ಯೋಗ ಮತ್ತು ಧ್ಯಾನ ಮಾಡಲು ಸಾಧ್ಯವಾಗದಿದ್ದರೆ, ಬೆವರು ಸುರಿಸಿ ನನ್ನ ಕೆಲಸವನ್ನು ಮಾಡಿ. ನಿಮಗೆ ನೀಡಲು ನನ್ನ ಬಳಿ ಬಹಳಷ್ಟು ಕೆಲಸಗಳಿವೆ. ಇಡೀ ರಾಷ್ಟ್ರಕ್ಕೆ, ಇಡೀ ಜನಸಂಖ್ಯೆಗೆ ನಾನು ಕೆಲಸ ನೀಡಬಲ್ಲೆ, ಅಷ್ಟು ಕೆಲಸಗಳು ನನ್ನ ಬಳಿ ಇದೆ, ಮತ್ತು ನಿಮಗೆ ಬೇಕಾದುದನ್ನು ನಾನು ನಿಮಗೆ ಒದಗಿಸುತ್ತೇನೆ. ನಿಮ್ಮ ತಲೆಯ ಮೇಲೆ ನಿಮಗೊಂದು ಛಾವಣಿಯ ಅಗತ್ಯವಿದೆಯೇ, ನಾನು ನಿಮಗೆ ಅದನ್ನು ಒದಗಿಸುತ್ತೇನೆ, ಇದು ನನ್ನ ಆಶ್ವಾಸನೆ, ಆದರೆ ಆತ್ಮಹತ್ಯೆಯನ್ನು ಮಾತ್ರ ಮಾಡಿಕೊಳ್ಳಬೇಡಿ.

ಮಾನವ ಶರೀರವು ತುಂಬಾ ಅಮೂಲ್ಯವಾಗಿದೆ

ವಿಭಿನ್ನ ಜೀವರಾಶಿಗಳು ಮತ್ತು ಅನೇಕ ದೇಹಗಳ ನಂತರ ನೀವು ಮಾನವ ಜನ್ಮ ಮತ್ತು ಮಾನವ ಶರೀರವನ್ನು ಪಡೆಯುತ್ತೀರಿ. ಹುಳು, ಕಪ್ಪೆ, ಚೇಳು, ಕೋಳಿ, ಯಾವುದೋ ಬಿಲದಲ್ಲಿ ಇರುವ ಒಂದು ಇಲಿ, ಅಲ್ಲಿ, ಇಲ್ಲಿ ಹಾರಿಹೋಗುವ ಬೆಕ್ಕು, ನಾಯಿ, ಪಕ್ಷಿ ಇದೆಲ್ಲ ಜನ್ಮಗಳ ನಂತರ ನೀವು ಮಾನವ ಜೀವನವನ್ನು ಪಡೆಯುತ್ತೀರಿ. ಆದ್ದರಿಂದ ಇದು ತುಂಬಾ ಅಮೂಲ್ಯವಾಗಿದೆ!

ಸುಖದ ಕುರಿತಾದ ತುಡಿತ ನಿಮ್ಮಲ್ಲಿನ ಖಿನ್ನತೆಗೆ ಕಾರಣವಾಗಿದೆ

ಎಚ್ಚರಗೊಂಡು ನೋಡಿ, ಎಲ್ಲಾ ಸುಖಗಳು ಕ್ಷಣಿಕವಾಗಿವೆ; ಅವು ಎಷ್ಟು ಹೊತ್ತು ಉಳಿಯುತ್ತದೆ? ಅದು ಕೇವಲ ಕ್ಷಣಿಕ ಎಂಬುದನ್ನು ಗಮನಿಸಿ. ಐದು ಹತ್ತು ನಿಮಿಷಗಳವರೆಗಿನ ಸುಖ, ನಂತರ ಅದು ಕೂಡ ಮುಗಿದು ಹೋಗುತ್ತದೆ.

ನೀವು ಯಾವುದಕ್ಕಾಗಿ ಹಾತೊರೆಯುತ್ತಿದ್ದೀರಿ? ಜನರು ನಿಮ್ಮನ್ನು ಮೆಚ್ಚಲಿ ಎಂದೇ? ಅದು ಅರ್ಥವಿಲ್ಲದ್ದು. ನಿಮ್ಮ ಮುಂದೆ ನಿಮ್ಮನ್ನು ಮೆಚ್ಚುವವರು, ನಿಮ್ಮ ಹಿಂದೆ ನಿಮ್ಮ ಬಗ್ಗೆ ಅಸೂಯೆ ಪಡುತ್ತಾರೆ. ಇಂದು ನಿಮ್ಮನ್ನು ಹೊಗಳುವವರು, ನಾಳೆ ನಿಮ್ಮನ್ನು ಟೀಕಿಸುತ್ತಾರೆ. ಅದರಿಂದ ಏನೀಗ? ನಾವು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ?

ಮೆಚ್ಚುಗೆ ಎಂದರೇನು? ಇನ್ನೊಬ್ಬರ ಮನಸ್ಸಿನಲ್ಲಿ ಹಾದುಹೋಗುವ ಕೆಲವು ಆಲೋಚನೆಗಳು ಅಷ್ಟೇ. ಅವು ಅವರಲ್ಲಿ ಶಾಶ್ವತವಾಗಿ ಇರುವುದೆಂದು ನೀವು ಭಾವಿಸಿದ್ದಿರಾ?

ಕೆಲವರು ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿರುತ್ತಾರೆ ಮತ್ತೆ ಕೆಲವರು ಕೆಟ್ಟ ಅಭಿಪ್ರಾಯವನ್ನು ಹೊಂದಿರುತ್ತಾರೆ. ಅದರಿಂದ ಏನೀಗ? ನಿಮ್ಮನ್ನು ಯಾರಾದರೂ ಟೀಕೆ ಮಾಡಿದರೆ ಏನೀಗ? ಟೀಕೆ ಮಾಡಿದವರೂ ಒಂದುದಿನ ಸಾವನ್ನಪ್ಪುತ್ತಾರೆ ಮತ್ತು ನೀವು, ಟೀಕೆಗೆ ಒಳಪಟ್ಟವರು, ಸಹ ಸಾವನ್ನಪ್ಪುತ್ತೀರಿ. ಒಂದು ದಿನ ಎಲ್ಲವೂ ಮುಗಿಯುತ್ತದೆ! ಹಾಗಿದ್ದಾಗ ಇನ್ನೊಬ್ಬರ ಮೆಚ್ಚುಗೆ ಅಥವಾ ಟೀಕೆಗಳ ಬಗ್ಗೆ ನೀವು ಏಕೆ ಹೆಚ್ಚು ತಲೆಕೆಡಿಸಿಕೊಳ್ಳುತ್ತೀರಿ? ನೀವು ನೀವಾಗಿರಬಹುದಲ್ಲವೇ? 

ಇತರರ ಟೀಕೆ ಅಥವಾ ಮೆಚ್ಚುಗೆಗಳಿಗೆ ತಲೆಕೊಡದೆ ಇರುವುದಾದರೆ ನಿಮ್ಮ ಮೇಲಿನ ಒಂದು ದೊಡ್ಡ ಭಾರವು ಇಳಿದಂತೆ. ಆಗ ನೀವು ಸಹಜವಾಗಿರಬಹುದು, ನಿವಾಗಿರಬಹುದು;. ಮತ್ತು ಈ ರೀತಿಯ ಲಘುವಾದ ಬದುಕುನಿಮ್ಮದಾದರೆ, ಅಲ್ಲಿ ಖಿನ್ನತೆಗೆ ಜಾಗವೆಲ್ಲಿದೆ? ನಾವು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ? 

ನಿಮಗೆ ಆತ್ಮಹತ್ಯೆಯ ಆಲೋಚನೆಗಳು ಬಂದರೆ - 

  1. ನಿಮ್ಮ ಪ್ರಾಣಶಕ್ತಿ ಕಡಿಮೆಯಾಗಿದೆ ಎಂದು ತಿಳಿಯಿರಿ. ಹೆಚ್ಚಿನ ಪ್ರಾಣಾಯಾಮ ಮಾಡಿ.
  2. ನಿಮಗಿಂತ ಹೆಚ್ಚು ಸಂಕಟದಲ್ಲಿರುವ ಲಕ್ಷಾಂತರ ಜನರಿದ್ದಾರೆ. ಅವರ ಬಗ್ಗೆ ಯೋಚಿಸಿ. ನಿಮ್ಮ ಸಂಕಟ ಚಿಕ್ಕದಾಗಿ ಕಂಡಾಗ ನೀವು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ.
  3. ಇಲ್ಲಿ ನಿಮ್ಮ ಅಗತ್ಯವಿದೆಯೆಂದು ತಿಳಿಯಿರಿ. ನೀವು ಉಪಯುಕ್ತರು ಎಂದು ನೆನೆಯಿರಿ. ನೀವು ಈ ಜಗತ್ತಿನಲ್ಲಿ ಮಾಡಬೇಕಾದ ಕೆಲಸ ಇನ್ನೂ ಸಾಕಷ್ಟು ಇದೆ ಎಂದು ತಿಳಿಯಿರಿ.
  4. ಬೇರೆ ಜನರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ಮರೆತುಬಿಡಿ.

ಜನರು ತಮ್ಮ ಪ್ರತಿಷ್ಠೆ ಅಥವಾ ಸ್ಥಾನಮಾನವನ್ನು ಕಳೆದುಕೊಂಡಿದ್ದ್ದೇವೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಯಾವ ಸ್ಥಾನಮಾನ? ಯಾವ ಪ್ರತಿಷ್ಠೆ? ನಿಮ್ಮ ಪ್ರತಿಷ್ಠೆಯ ಬಗ್ಗೆ ಯೋಚಿಸಲು ಯಾರಿಗೆ ಸಮಯವಿದೆ? ಎಲ್ಲರೂ ತಮ್ಮದೇ ಆದ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ತಮ್ಮ ಮನಸ್ಸಿನ ತೊಳಲಾಟದಿಂದಲೇ ಹೊರಬರಲು ಪರಿತಪಿಸುತ್ತಿದ್ದಾರೆ ಇನ್ನು ನಿಮ್ಮ ಬಗ್ಗೆ ಯೋಚಿಸಲು ಅವರಿಗೆ ಸಮಯ ಎಲ್ಲಿದೆ? ಇತರರು ನಿಮ್ಮನ್ನು ಅಗೌರವಗೊಳಿಸಲಿದ್ದಾರೆ ಎಂದು ನೀವು ಭಾವಿಸುವುದರಿಂದ ಈ ರೀತಿಯ ಪ್ರವೃತ್ತಿಗಳು ಬರುತ್ತವೆ. ನಾವು ನಿಮಗೆ ಹೇಳುತ್ತೇವೆ, ಸಮಾಜವು ನಿಮ್ಮ ಬಗ್ಗೆ ಏನು ಯೋಚಿಸುತ್ತದೆ ಎಂಬುದರ ಬಗ್ಗೆ ಚಿಂತೆ ಮಾಡುವುದು ನಿಷ್ಪ್ರಯೋಜಕವಾಗಿದೆ.

ಮುಖ್ಯವಾಗಿ, ಆತ್ಮಹತ್ಯೆ ಅತ್ಯಂತ ಕೆಟ್ಟ ವಿಷಯ ಎಂದು ನಾವು ಅರಿತುಕೊಳ್ಳಬೇಕು. ನಮ್ಮ ‘ಆನಂದದ ಅನುಭೂತಿ ಶಿಬಿರ’ಗಳನ್ನು ನಾವು ಈ ಕಾರಣಕ್ಕಾಗಿಯೇ ಹೆಚ್ಚು ಹೆಚ್ಚು ನಡೆಸಬೇಕು. ನಾವು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ? ನೀವು ಪ್ರಾಣಾಯಾಮವನ್ನು, ಸುದರ್ಶನ ಕ್ರಿಯೆಯನ್ನು ಮಾಡಲು ಪ್ರಾರಂಭಿಸಿದಾಗ, ಈ ಆಲೋಚನೆಗಳೆಲ್ಲವೂ ಹೊರಟು ಹೋಗುತ್ತವೆ!

ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ

Know that you are needed, you are useful | Article by Gurudev : CLICK HERE TO READ



ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು

Unknown ಹೇಳಿದ್ದಾರೆ…
Jai Gurudev.
Good suggestions. Thanks Guruji