ಪ್ರಶ್ನೆ 72. ಗುರುದೇವ, ‘ಪರಿಪೂರ್ಣವಾದ ಸಂಬಂಧ’ದ ಕುರಿತು ವಿಸ್ತಾರವಾಗಿ ಹೇಳಬಹುದೇ?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ದೋಣಿಯನ್ನು ಹೇಗೆ ಮುನ್ನಡೆಸಬೇಕೆಂಬುದು ನಿಮಗೆ ತಿಳಿದಿದ್ದರೆ, ಯಾವುದೇ ದೋಣಿಯನ್ನು ಬೇಕಾದರೂ ನೀವು ನಡೆಸಬಹುದು. ಆದರೆ ನಿಮಗೆ, ಹುಟ್ಟು ಹಾಕುವುದು ಹೇಗೆಂದು ತಿಳಿದಿಲ್ಲದಿದ್ದರೆ, ಕೇವಲ ದೋಣಿಗಳನ್ನು ಬದಲಾಯಿಸುವುದರಿಂದ ಯಾವುದೇ ಉಪಯೋಗವಿಲ್ಲ.

ಅಂತೆಯೇ, ಸಂಬಂಧಗಳನ್ನು ಬದಲಾಯಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಶೀಘ್ರವೇ ಹೊಸ ಸಂಬಂಧದಲ್ಲೂ ಅದೇ ಪರಿಸ್ಥಿತಿಯಲ್ಲಿ ಸಿಕ್ಕಿಬೀಳುತ್ತಿರಿ.

ಹೆಚ್ಚಿನ ಜನರು ‘ಪರಿಪೂರ್ಣವಾದ ಸಂಬಂಧ’ವನ್ನು ಹೊರಗೆಲ್ಲೋ ಹುಡುಕುತ್ತಿರುತ್ತಾರೆ. ಆದರೆ ಕೆಲವರು ಮಾತ್ರವೇ ತಮ್ಮ ಅಂತರಾಳದಲ್ಲಿ, ಸಂಬಂಧಗಳನ್ನು ಬೆಸೆದುಕೊಳ್ಳುವಲ್ಲಿ ಇದನ್ನು ನೋಡಬಲ್ಲವರಾಗಿರುತ್ತಾರೆ; ಸ್ವತಃ ನಿಮ್ಮೊಂದಿಗೆ ನಿಮ್ಮ ಸಂಬಂಧ ಹೇಗಿದೆ? 

ಸಾಮಾನ್ಯವಾಗಿ ಜನರು, ‘ನಾನು ಒಂಟಿಯಾಗಿದ್ದೀನಿ. ಒಂಟಿತನ ತುಂಬಾ ಬೇಸರವಾಗಿದೆ. ನನಗೆ ಸಂಗಾತಿಯ ಅಗತ್ಯವಿದೆ. ನನಗೊಂದು ಬಾಂಧವ್ಯದ ಅಗತ್ಯವಿದೆ’ ಎಂದು ಯೋಚಿಸುತ್ತಾರೆ. ’ನಿಮ್ಮ ಸ್ವಂತ ಒಡನಾಟವೇ ನಿಮಗೆ ಇಷ್ಟು ಬೇಸರ ತರಿಸಿದ್ದರೆ, ಇನ್ನು ಬೇರೆಯವರಿಗೆ ನಿಮ್ಮ ಒಡನಾಟ ಎಷ್ಟು ನೀರಸವಾಗಿರಬೇಕು’ ಎಂದು ಯೋಚಿಸಿ. ತಮ್ಮಲ್ಲಿ ಈಗಾಗಲೇ ಬೇಸರಗೊಂಡಿರುವ ಈ ರೀತಿಯ ಇಬ್ಬರು ಒಟ್ಟಿಗೆ ಸೇರಿಕೊಳ್ಳುವುದರಿಂದ ಪರಸ್ಪರ ಒಬ್ಬರಿಗೊಬ್ಬರು ಮತ್ತಷ್ಟು ಬೇಸರವನ್ನಷ್ಟೇ ತರಲುಸಾಧ್ಯ! 

ನಿಮ್ಮ ಸಂಬಂಧವು ವೈಯಕ್ತಿಕ ಅಗತ್ಯವನ್ನು ಆಧರಿಸಿದ್ದರೆ ಅದು ಹೆಚ್ಚು ಕಾಲ ಉಳಿಯುವುದಿಲ್ಲ. ದೈಹಿಕವಾಗಿ ಅಥವಾ ಭಾವನಾತ್ಮಕ ಮಟ್ಟದಲ್ಲಿ ಆ ಅಗತ್ಯವು ಪೂರ್ಣಗೊಂಡ ನಂತರ, ಮನಸ್ಸು ಆಗಲೇ ಬೇರೆನ್ನನ್ನೋ ಹುಡುಕುತ್ತಾ ಬೇರೆಡೆ ಹೋಗುತ್ತದೆ. ಅದೇ ನಿಮ್ಮ ಸಂಬಂಧವು, ಹಂಚಿಕೊಳ್ಳುವ ಮತ್ತು ಸಂತೋಷವನ್ನು ನೀಡುವ ಮನಸ್ಸನ್ನು ಆಧರಿಸಿದ್ದರೆ, ಅದು ಹೆಚ್ಚು ಕಾಲ ಉಳಿಯುತ್ತದೆ.

ನೀವು ನಿಮ್ಮ ಸಂಗಾತಿಯಲ್ಲಿ ಸುರಕ್ಷತೆ, ಪ್ರೀತಿ ಮತ್ತು ಸೌಕರ್ಯವನ್ನು ಅರಸುತ್ತಿದ್ದರೆ ಅದರಿಂದ ನೀವು ದುರ್ಬಲರಾಗುತ್ತೀರಿ. ದುರ್ಬಲತೆಯಿಂದ ನಕಾರಾತ್ಮಕ ಭಾವನೆಗಳು ಬರುತ್ತವೆ ಮತ್ತು ಆಗ ನಿಮ್ಮ ಬೇಡಿಕೆಗಳು ಹೆಚ್ಚಾಗುತ್ತದೆ. ಬೇಡಿಕೆ ಪ್ರೀತಿಯನ್ನು ನಾಶಪಡಿಸುತ್ತದೆ. ಈ ವಿಷಯವನ್ನು ನಾವು ಸರಿಯಾಗಿ ತಿಳಿದುಕೊಂಡರೆ, ಸಂಬಂಧಗಳಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಬಹುದು.

ಪ್ರೀತಿಯ ಬಗೆಗಿನ ಸೀಮಿತ ಅರಿವು ಮತ್ತು ಸೀಮಿತ ಅನುಭವವು ನಿಮ್ಮನ್ನು ನೀವು ಸಂಕುಚಿತ ಮನಸ್ಥಿತಿಯಲ್ಲಿ ಬಂಧಿಸಿಕೊಳ್ಳುವಂತೆ ಮಾಡುತ್ತದೆ. ಸಹಜವಾಗಿ ಇದು ಉಸಿರುಕಟ್ಟಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ನಾವೇ ಬಯಸಿದ, ಕೇಳಿದ ಪ್ರೀತಿಯನ್ನು ನಿಭಾಯಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ, ಏಕೆಂದರೆ ನಾವು ನಮ್ಮ ಮನಸ್ಸಿನ, ನಮ್ಮ ಸ್ವಂತ ಪ್ರಜ್ಞೆಯ ಆಳವನ್ನು ಎಂದಿಗೂ ಗಮನಿಸಿಲ್ಲ.  

ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ

10 Things to know to improve your Relationships instantly : CLICK HERE TO READ



ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು