ಪ್ರಶ್ನೆ 67. ಗುರುದೇವ, ಎಲ್ಲವೂ ಅನಿತ್ಯವೆಂದು ತಿಳಿದೂ ಸಹ ನಾವು ನಮ್ಮ ಸಂವೇದನಾಶೀಲತೆಯನ್ನು ಉಳಿಸಿಕೊಳ್ಳುವುದು ಹೇಗೆ?


ಗುರುದೇವ್ ಶ್ರೀ ಶ್ರೀ ರವಿಶಂಕರ್:

ನೀವು ಪ್ರಯತ್ನಪೂರ್ವಕವಾಗಿ ಸೂಕ್ಷ್ಮತೆಯನ್ನು ಅಥವಾ ಸಂವೇದನಾಶೀಲತೆಯನ್ನು ಅಭ್ಯಾಸ ಮಾಡಲು ಸಾಧ್ಯವಿಲ್ಲ, ಅದು ಇರುವುದಾದರೆ ಇದೆ, ಇಲ್ಲದಿದ್ದರೆ ಇಲ್ಲವಷ್ಟೇ. ಸಂವೇದನೆ ಚಿಂತನೆಗೆ ಮೀರಿದ್ದು, ಅದು ಭಾವನೆಯ ಮಟ್ಟದಲ್ಲಿ ಇರುವುದು. ನಿಮ್ಮಲ್ಲಿ ಸೂಕ್ಷ್ಮತೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಒತ್ತಡದಿಂದ ಮುಕ್ತರಾಗಿ ಆನಂದದಿಂದಿರುವಾಗ ನೀವು ಸಹಜವಾಗಿಯೇ ಸಂವೇದನಾಶೀಲತೆಯಿಂದ ಕೂಡಿರುತ್ತೀರಿ. ಅದೇ ನೀವು ಒತ್ತಡದಲ್ಲಿದ್ದಾಗ ಅಥವಾ ಶೋಚನೀಯರಾಗಿದ್ದಾಗ ನಿಮ್ಮಲ್ಲಿ ಸಂವೇದನಾಶೀಲತೆ ಇರುವುದಿಲ್ಲ.

ಸಾಮಾನ್ಯವಾಗಿ ಜನರು ಶೋಚನೀಯವಾಗಿರುವ ವ್ಯಕ್ತಿಯು ತುಂಬಾ ಸೂಕ್ಷ್ಮ ಎಂದು ಭಾವಿಸುತ್ತಾರೆ. ನೀವು ಶೋಚನೀಯರಾಗಿದ್ದಾಗ ನಿಮ್ಮನ್ನು ನೀವು ಬಂಧಿಸಿಕೊಂಡಿರುತ್ತೀರಿ. ಆಗ ನೀವು ಇತರರ ಠೀಕೆಗಳ ಬಗ್ಗೆ ಸೂಕ್ಷ್ಮವಾಗಿರಬಹುದು, ಆದರೆ ಇತರರ ಭಾವನೆಗಳಿಗೆ ಸೂಕ್ಷ್ಮವಾಗಿರುವುದಿಲ್ಲ, ಇದು ಏಕಮುಖವಾದ ಸಂವೇದನೆ. ನಿಮ್ಮ ಗ್ರಹಿಕೆ ಸಂಪೂರ್ಣವಾಗಿರುವುದಿಲ್ಲ ಆದ್ದರಿಂದ ನೀವು ಇತರರ ಭಾವನೆಗಳಿಗೆ ಸೂಕ್ಷ್ಮತೆಯಿಂದ ಸ್ಪಂದಿಸಲಾಗುವುದಿಲ್ಲ. ನೀವು ದುರ್ಬಲರಾಗಿರುತ್ತೀರಿ. ಆದರೆ ನಿಮ್ಮ ಮನಸ್ಸು ಕೇಂದ್ರೀಕೃತವಾಗಿರುವಾಗ, ಇತರರ ಭಾವನೆಗಳಿಗೆ ಸಹ ಸೂಕ್ಷ್ಮವಾಗಿ ಸ್ಪಂದಿಸಲು ನೀವು ಶಕ್ತರಾಗಿರುತ್ತೀರಿ.

ಇಲ್ಲಿ ಎರಡು ರೀತಿಯ ಸೂಕ್ಷ್ಮತೆಯನ್ನು ನೀವು ಗಮನಿಸಿದಿರಾ? ಒಂದು ದುರ್ಬಲತೆ - ನೀವು ನೊಂದಿರುವಾಗ ಮತ್ತು ಅಸಮಾಧಾನದಿಂದಿರುವಾಗ ತುಂಬಾ ದುರ್ಬಲರಾಗಿರುತ್ತೀರಿ. ನಿಮ್ಮ ಮೇಲೆ ನೀವು ಅನುಕಂಪ ಪಡುತ್ತಿರುವಾಗ, ಯಾರೇ ಆದರೂ ನಿಮ್ಮ ಬಗ್ಗೆ ಏನೇ ಹೇಳಲಿ, ಅದನ್ನು ಸ್ವೀಕರಿಸಲು ನೀವು ಸಿದ್ಧವಾಗಿರುತ್ತೀರ. ಇದರರ್ಥ ನೀವು ಇತರರ ಭಾವನೆಗಳಿಗೆ ಸ್ಪಂದಿಸುತ್ತೀರಿ ಎಂದಲ್ಲ. ಅದೇ ನಿಮ್ಮಲ್ಲಿ ಶಾಂತಿ, ನೆಮ್ಮದಿ, ಸಂತೋಷವಿದ್ದಾಗ, ಮನಸ್ಸು ಕೇಂದ್ರೀಕೃತವಾಗಿದ್ದಾಗ ಮಾತ್ರ ನೀವು ಇತರರ ಅಗತ್ಯತೆಗಳು ಮತ್ತು ಅವಶ್ಯಕತೆಗಳಿಗೆ ಸ್ಪಂದಿಸುವವರಾಗುತ್ತೀರಿ - ಅದು ವಿಭಿನ್ನ ರೀತಿಯ ಸೂಕ್ಷ್ಮತೆ.

ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ

1. The creator and the creation are one and the same : CLICK HERE TO READ

2. Transcend the words, then love appears : CLICK HERE TO READ






ಕಾಮೆಂಟ್‌ಗಳು