ಪ್ರಶ್ನೆ 57: ಗುರುದೇವ, ಗುರು-ಶಿಷ್ಯ ಸಂಬಂಧವನ್ನು ದಯವಿಟ್ಟು ವಿವರಿಸಬಹುದೇ?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ನೀವು ಏನಾದರೂ ಸುಂದರವಾದದ್ದನ್ನು ನೋಡಿದಾಗ ಅಥವಾ ಇಷ್ಟಪಟ್ಟಾಗ, ನಿಮ್ಮಲ್ಲಿ ಏನಾಗುತ್ತದೆ ಎಂದು ಗಮನಿಸಿದ್ದೀರಾ? ನೀವು ಅದನ್ನು ಹಿಡಿದಿಡಲು ಮತ್ತು ಅದನ್ನು ನಿಮ್ಮದಾಗಿಸಿಕೊಳ್ಳಲು ಬಯಸುತ್ತೀರಿ. ಪ್ರೀತಿಯನ್ನು ಅಥವಾ ಪ್ರೀತಿಸಿದ ವ್ಯಕ್ತಿ ಅಥವಾ ವಸ್ತುವನ್ನು ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸುವುದರಿಂದ ಆ ಪ್ರೀತಿಯಲ್ಲಿನ ಸೌಂದರ್ಯವು ನಾಶವಾಗುತ್ತದೆ ಮತ್ತು ಅದು ಪ್ರೀತಿಯನ್ನು ಕುರೂಪಗೊಳಿಸುತ್ತದೆ. ನಂತರ, ಅದೇ ಪ್ರೀತಿ ನಿಮಗೆ ನೋವು ನೀಡುತ್ತದೆ.

ನೀವು ಯಾರನ್ನಾದರೂ ಪ್ರೀತಿಸಿದಾಗಲೆಲ್ಲಾ, ಅವರಿಗೆ ನಿಯಮಗಳನ್ನು ನಿರ್ದೇಶಿಸಲು ಪ್ರಯತ್ನಿಸುತ್ತೀರಿ. ಸೂಕ್ಷ್ಮ ರೀತಿಯಲ್ಲಿ, ನೀವು ಅವರನ್ನು ನಿಯಂತ್ರಿಸಲು ಪ್ರಯತ್ನಿಸುತ್ತೀರಿ. ಯಾವುದನ್ನೇ ಆಗಲಿ ನಾವು ನಿಯಂತ್ರಿಸಲು, ಸ್ವಾಧೀನಪಡಿಸಿಕೊಳ್ಳಲು ಅಥವಾ ಕುಶಲತೆಯಿಂದ ಬದಲು ಮಾಡಲು ಪ್ರಯತ್ನಿಸಿದಾಗ, ಅದು ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಕಾರಣ ನಮ್ಮಲ್ಲಿರುವ ‘ನಾನು’ ಎಂಬ ಸಣ್ಣತನ - ನಾನು, ನಾನು, ನಾನು, - ಸ್ವತಃ ಈ ನಾನು ಎಂಬುದೇ ಸೌಂದರ್ಯಹೀನವಾಗಿದೆ. ಸ್ವಾಧೀನಪಡಿಸಿಕೊಂಡ ತಕ್ಷಣದಲ್ಲೇ ಪ್ರೀತಿ ನಾಶವಾಗುತ್ತದೆ. ನಿಮಗೆ ಈ ರೀತಿಯ ಅನುಭವವಾಗಿಲ್ಲವೇ?

ಇದು ಬಾಲ್ಯದಲ್ಲಿ ತಾಯಿಯೊಂದಿಗಿನ ಸಂಬಂಧದೊಂದಿಗೆ ಪ್ರಾರಂಭವಾಗುತ್ತದೆ, ‘ನನ್ನನ್ನು ಮತ್ತು ನನ್ನನ್ನು ಮಾತ್ರವೇ ಪ್ರೀತಿಸು’ ಎಂಬುದು ನಮ್ಮ ಆಳವಾದ ಸಂಸ್ಕಾರ. ಪ್ರೀತಿಸುವ ವ್ಯಕ್ತಿಯನ್ನು ಕಳೆದುಕೊಳ್ಳಲು ನಾವು ಬಯಸುವುದಿಲ್ಲ. ಯಾರನ್ನಾದರೂ ಅಥವಾ ಯಾವುದನ್ನಾದರೂ ಕಳೆದುಕೊಳ್ಳುವ ಭಯದಿಂದ ಕೂಡಿದ ಪ್ರೀತಿ ಅರಳುವುದಿಲ್ಲ. ಅದು ಕುರೂಪವಾಗುತ್ತದೆ ಮತ್ತು ಅಲ್ಲಿ ಅಸೂಯೆ ಬರುತ್ತದೆ. ವಿಶಾಲವಾದ ಮತ್ತು ಅಗಾಧವಾದ ಯಾವುದನ್ನೂ ಆಗ ನಾವು ಪ್ರೀತಿಸಲಾಗುವುದಿಲ್ಲ. ನಿಮ್ಮಲ್ಲಿ ಎಲ್ಲಿಯವರೆಗೆ ಈ ಸಣ್ಣತನ ಇರುತ್ತದೋ ಅಲ್ಲಿಯವರೆಗೆ ಸುಖ, ಸಂತೋಷ ಅಥವಾ ಶಾಂತಿ ಇರುವುದಿಲ್ಲ. ಮನಸ್ಸು ವಿಸ್ತರಿಸುತ್ತಾ, ಹೃದಯದಲ್ಲಿ ವಿಶಾಲತೆ ಮೂಡುವುದೇ ಸಂತೋಷ. ನಿಮ್ಮಲ್ಲಿ ತುಂಬಾ ಪ್ರೀತಿಯಿರುವಾಗ ಮತ್ತು ಅದನ್ನು ನೀವು ಸ್ವಾಧೀನಪಡಿಸಿಕೊಳ್ಳಲು ಆಗದಿದ್ದಾಗ ಮಾತ್ರ ಇದು ಸಂಭವಿಸಬಹುದು.

ನೀವು ಗುರುವನ್ನು ಪ್ರೀತಿಸಬಹುದು, ಆದರೆ ನೀವು ಗುರುವನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ಗುರುವನ್ನು ಪಡೆದಿರುವುದರಿಂದ ಒಳ್ಳೆಯದೇ ಆಗುತ್ತದೆ, ಏಕೆಂದರೆ ಸ್ವಾಧೀನಪಡಿಸಿಕೊಳ್ಳದೇ ಇರುವಂತಹ ಪ್ರೀತಿಯ ಅನುಭವವನ್ನು ನೀವು ಈವರೆಗೆ ಪಡೆದಿರುವುದಿಲ್ಲ. ಗುರುವಿನಲ್ಲಿ, ನೀವು ಆ ಪ್ರೀತಿಯನ್ನು ಅನುಭವಿಸಬಹುದು. ನಿಮ್ಮ ಮನಸ್ಸು ಅದನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ನಿಮಗೆ ಆ ರೀತಿಯ ಪ್ರೀತಿಯ ಅನುಭವವಿಲ್ಲದ ಕಾರಣ, ನಿಮ್ಮ ಮನಸ್ಸು ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಒತ್ತಡ ಅನುಭವಿಸಬಹುದು ಅಥವಾ ಹತಾಶೆಗೆ ಒಳಗಾಗಬಹುದು. ಇದು ‘ಹುಳಿ ದ್ರಾಕ್ಷಿ’ಯಂತೆ. ಇದರಿಂದ ಓಡಿಹೋಗುವ ಮತ್ತು ಹಿಂದೆ ಸರಿಯುವ ಪ್ರವೃತ್ತಿ ಉಂಟಾಗಬಹುದು. ಆದರೆ ಅದು ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ. ನೀವು ಈಜಲು ಬಂದಿದ್ದೀರಿ, ಆದರೆ ಬದಲಾಗಿ ಕೇವಲ ನಿಮ್ಮ ಪಾದಗಳನ್ನು ಒದ್ದೆ ಮಾಡಿಕೊಂಡು ಹಿಂತಿರುಗಿದರೆ ಏನೂ ಪ್ರಯೋಜನವಿಲ್ಲ. ನೀವು ಮನಸ್ಸನ್ನು ಕೇಂದ್ರೀಕರಿಸಿಕೊಂಡು, ಪ್ರೀತಿಸುವ ಹೊಸ ಮಾರ್ಗವನ್ನು ಕಲಿಯಬೇಕು. ಅದು ಇಲ್ಲಿ, ಗುರುವಿನ ಬಳಿ ಸಂಭವಿಸುತ್ತದೆ.

ಗುರುವನ್ನು ಪ್ರೀತಿಸುವುದು ಮೊದಲ ಹೆಜ್ಜೆ. ದೇವರು ತುಂಬಾ ಸಾರ್ವಜನಿಕ ಮತ್ತು ಸಾರ್ವತ್ರಿಕ, ಎಲ್ಲರಿಗೂ ಸೇರಿದವನು, ಇಡೀ ಸೃಷ್ಟಿಗೆ ಸೇರಿದವನು. ನೀವು ಸಾರ್ವಜನಿಕವಾದದ್ದನ್ನು ಪ್ರೀತಿಸುವುದಿಲ್ಲ. ಆದರೆ, ಗುರುವಿನ ಮೂಲಕ ಒಂದು ವೈಯಕ್ತಿಕ ಸಂಪರ್ಕವಿದೆ, ಮತ್ತು ಆ ಬಂಧವು ಅನಂತವಾಗಿದೆ. ಇದೇ ಸೇತುವೆಯಾಗುತ್ತದೆ, ಏಕೆಂದರೆ, ನಿಮಗೆ ಮುಂಚಿನಿಂದಲೂ ವೈಯಕ್ತಿಕ ಸಂಪರ್ಕಗಳನ್ನು ಮಾತ್ರ ತಿಳಿದುಕೊಳ್ಳಲು ಬರುವುದು.

ಗುರುವು ಪ್ರೀತಿಯನ್ನು ಸ್ವಾಧೀನಪಡಿಸಿಕೊಳ್ಳುವ ಮಾದರಿಯನ್ನು ಮುರಿಯುತ್ತಾರೆ. ನೀವು ನಿಯಮಗಳನ್ನು ನಿರ್ದೇಶಿಸುತ್ತಿದ್ದೀರಿ ಅಥವಾ ಅಧೀನ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎಂದು ತೋರುತ್ತಿರುವಾಗ, ಗುರುವು ಅದಕ್ಕೆ ಸಂಪೂರ್ಣ ವಿರುದ್ಧವಾದದ್ದನ್ನೇ ಮಾಡುತ್ತಾರೆ - ಅಗತ್ಯಕ್ಕೆ ತಕ್ಕಂತೆ ಮೊಳೆಯನ್ನು ಇನ್ನಷ್ಟು ಬಿಗಿಗೊಳಿಸುತ್ತಾರೆ ಇಲ್ಲಾ ಸಡಿಲಗೊಳಿಸಿತ್ತಾರೆ. ಹಾಗೆಯೇ ಗುರುವು ಏನನ್ನೂ ಮಾಡುತ್ತಿಲ್ಲ, ಅದು ಅವರ ಮೂಲಕ ಸಂಭವಿಸುತ್ತಿದೆ ಅಷ್ಟೇ. ಇದು ಮಹತ್ ಮನಸ್ಸಿನ ಮೂಲಕ ನಡೆಯುತ್ತಿದೆ. ಇಲ್ಲಿ ಪೂರ್ವ ಕಲ್ಪಿತ ಯೋಜನೆ ಇಲ್ಲ. ಕ್ರಿಯೆಗಳು ಸ್ವಯಂಪ್ರೇರಿತವಾಗಿವೆ ಅಷ್ಟೇ.

ಗುರು-ಶಿಷ್ಯ ಸಂಬಂಧವನ್ನು ತಂದೆ, ಸಹೋದರ, ಸಹೋದರಿ, ಹೆಂಡತಿ ಅಥವಾ ಸ್ನೇಹಿತರಂತೆ ಮತ್ತೊಂದು ಸಂಬಂಧವನ್ನಾಗಿ ಮಾಡಬೇಡಿ. ಇದು ಬೇರೆ ಯಾವುದೇ ಸಂಬಂಧದ ರೀತಿಯಲ್ಲ. ಹಾಗೇನಾದರೂ ಭಾವಿಸಿದರೆ, ಇಲ್ಲಿ ಸಹ ನೀವು ಅದೇ ರೀತಿಯ ಸ್ವಾಧೀನಪರತೆಯ ಮನೋಭಾವವನ್ನು ಪಡೆಯುತ್ತೀರಿ.


ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ

1. The transformative story of Angulimala(Buddha's Disciple) : CLICK HERE TO READ
2. What made the disciple angry and the master happy? : CLICK HERE TO READ
3. Why did buddha wait for this little girl? : CLICK HERE TO READ



ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು