ಪ್ರಶ್ನೆ 24: ಪ್ರೀತಿ ಎಂದರೇನು ಮತ್ತು ಸಂಬಂಧಗಳಲ್ಲಿ ಏಕೆ ಇದರಿಂದ ಬಳಲಾಟವಿದೆ? |ಗುರುದೇವ್ ಶ್ರೀ ಶ್ರೀ ರವಿಶಂಕರ್


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಇದರ ಬಗ್ಗೆ ನಿಮಗೆ ತಿಳಿದಿಲ್ಲವಾದರೆ ಅದನ್ನು ಎಂದಿಗೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಈ ಪ್ರಪಂಚದಲ್ಲಿ ಪ್ರೀತಿಯ ಅರಿವು ಇಲ್ಲದಿರುವ ಒಂದು ಜೀವಿಯೂ ಕೂಡ ಇಲ್ಲ. ಒಂದು ಕಡೆ ಇದು ಸತ್ಯವಾದರೂ ಇನ್ನೊಂದೆಡೆ ಪ್ರೀತಿಯ ಬಗ್ಗೆ ನಿಜವಾಗಿ ಯಾರಿಗೂ ಸರಿಯಾಗಿ ತಿಳಿದಿಲ್ಲ.

ಪ್ರೀತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಅಸಾಧ್ಯ, ಅದನ್ನು ಅನುಭವಿಸಲು ಮಾತ್ರ ಸಾಧ್ಯ. ನೀವು ಏಕೆ ಅದನ್ನು ವಿಶ್ಲೇಷಣೆ ಮಾಡಿ ಅದಕ್ಕೆ ಹಣೆಪಟ್ಟಿ ಕಟ್ಟಲು ಪ್ರಯತ್ನಿಸುತ್ತೀರಿ?

ಬೇರೆ ಬೇರೆ ತರಹದ ಪ್ರೀತಿಯ ಬಗ್ಗೆ, ಅದರ ವಿಭಾಗಗಳ ಬಗ್ಗೆ ನೀವು ವಿವರಿಸುತ್ತಾ ಹೋಗಬಹುದು, ಆದರೆ ಅದರ ಪರಿಣಾಮಗಳೇನು? ನಿಜವಾಗಿ ಹೇಳುವುದಾದರೆ ಎಲ್ಲಾ ನಕಾರಾತ್ಮಕ ಭಾವನೆಗಳು ಪ್ರೀತಿಯ ವಿಕೃತ ರೂಪಗಳು. ನಿಮ್ಮ ಕೋಪಕ್ಕೂ ಮೂಲ ಕಾರಣ ಪ್ರೀತಿಯೇ. ನೀವು ಪರಿಪೂರ್ಣತೆಗಳನ್ನು ಪ್ರೀತಿಸುತ್ತೀರಿ, ಅದರಿಂದ ನೀವು ಅಪೂರ್ಣತೆಗಳ ಬಗ್ಗೆ ಕೋಪಗೊಳ್ಳುತ್ತೀರಿ. ನೀವು ಜನಗಳನ್ನು ತುಂಬಾ ಪ್ರೀತಿಸಿಬಿಡುತ್ತೀರಿ, ಅದರಿಂದ ಮೋಹ ಅಥವಾ ಹೊಟ್ಟೆಕಿಚ್ಚು ಬರುತ್ತದೆ. ನೀವು ನಿಮ್ಮನ್ನೇ ತುಂಬಾ ಪ್ರೀತಿಸಿಕೊಂಡರೆ ಅದರಿಂದ ಅಹಂಕಾರ ಹುಟ್ಟುತ್ತದೆ. ನೀವು ಮನುಷ್ಯರಿಗಿಂತ ಹೆಚ್ಚಾಗಿ ವಸ್ತುಗಳನ್ನು ಪ್ರೀತಿಸಿದರೆ ಅದು ದುರಾಸೆಯಾಗುತ್ತದೆ. ಪ್ರೀತಿಯ ಜೊತೆ ಜ್ಞಾನ ಸೇರಿಕೊಂಡರೆ ಅದು ನಿಮ್ಮನ್ನು ಆನಂದದ ಕಡೆ ಕೊಂಡೊಯ್ಯುತ್ತದೆ. ಪ್ರೀತಿಯ ಜೊತೆ ಜ್ಞಾನವಿಲ್ಲದಿದ್ದರೆ ಅದು ನಿಮ್ಮನ್ನು ದುಃಖದ ಕಡೆ ಕೊಂಡೊಯ್ಯುತ್ತದೆ. ನೀವು ಇದನ್ನು ವಿಶ್ಲೇಷಣೆ ಮಾಡುತ್ತಾ ಹೋಗಬಹುದು, ಆದರೆ ಅದರ ಪ್ರಯೋಜನವೇನು?

ನಿಮ್ಮ ಮನೆಯಲ್ಲಿ ನಾಯಿಮರಿ ಇದ್ದರೆ ಅದು ನಿಮಗೆ ಪ್ರೀತಿಯನ್ನು ತಿಳಿಸುತ್ತದೆ. ನೀವು ಮನೆಗೆ ಹಿಂದಿರುಗಿದಾಗ ನಿಮ್ಮ ಮನೆಯ ನಾಯಿಯು ನಿಮಗೆ ಪ್ರೀತಿಯನ್ನು ತೋರಿಸುತ್ತದೆ. "ನಿನ್ನೆ ನಾನು ನಿನ್ನನ್ನು ಸ್ವಾಗತಿಸಿದೆ, ಇಂದು ಸ್ವಾಗತಿಸುವುದಿಲ್ಲ" ಎಂದು ನಾಯಿ ಹೇಳುವುದಿಲ್ಲ. ಪ್ರೀತಿಯ ಅನುಭವ ಪ್ರತಿದಿನ ನೀವು ಮನೆಗೆ ಹಿಂತಿರುಗಿದಾಗ ಒಂದು ಮಗು ಅಥವಾ ನಾಯಿಮರಿ ನಿಮಗೆ ತೋರಿಸುತ್ತದೆ.

ಒಂದು ಮಗು ಕೆಲವು ಘಳಿಗೆಗಳಲ್ಲಿ ತೋರಿಸುವ ಪ್ರೀತಿ ಗಂಟೆಗಟ್ಟಲೇ ಪ್ರವಚನದಿಂದ ಸಿಗುವುದಿಲ್ಲ.

ಪ್ರೀತಿಯ ವಿಷಯದಲ್ಲಿ, ಒಂದು ನೋಟದಿಂದ ಸಿಗುವಂತಹ ಅನುಭವವನ್ನು ಸಾವಿರ ಪದಗಳು ಹೇಳಲಾಗದು. ಹಾಗೆಯೇ, ಒಂದು ಕ್ಷಣ ಆಳವಾದ ಒಳಗಿನ ಮೌನದಲ್ಲಿ ಸಿಗುವ ಅನುಭವವು ಲಕ್ಷಗಟ್ಟಲೆ ನೋಟಗಳಲ್ಲಿ ಸಿಗುವುದಿಲ್ಲ. ಅದೇ ಪ್ರೀತಿಯ ರಹಸ್ಯ! ನೀವು ಪ್ರೀತಿಯೆನ್ನುವ ವಸ್ತುವಿನಿಂದಲೇ ಮಾಡಲ್ಪಟ್ಟಿದ್ದೀರಿ ಮತ್ತು ಪ್ರಪಂಚದಲ್ಲಿರುವ ಎಲ್ಲವೂ ಪ್ರೀತಿಯಿಂದಲೇ ಆಗಿದೆ.

ಪ್ರೀತಿಯ ಜೊತೆ ಜ್ಞಾನ ಸೇರಿಕೊಂಡರೆ ಅದು ಆನಂದ. ಪ್ರೀತಿಯ ಜೊತೆ ಜ್ಞಾನ ಇಲ್ಲದಿದ್ದರೆ ಅದರಿಂದ ನೋವು. ಪ್ರೀತಿಯಲ್ಲಿ ನೋವು ಏಕಿದೆ ಎಂದು ನೀವು ಪ್ರಶ್ನೆಮಾಡುತ್ತಿರುತ್ತೀರಿ. ನಿಜವಾಗಿ ನೋಡಿದರೆ ಪ್ರೀತಿಯಿಂದ ನೋವು ಇರುವುದಿಲ್ಲ. ಶುದ್ಧವಾದ ಪ್ರೀತಿಯಲ್ಲಿ ನೀವು ಬೇರೆಯವರ ಬಗ್ಗೆ ಕಾಳಜಿ ಮಾಡುತ್ತಿರುತ್ತೀರಿ, ಅವರ ಒಳಿತನ್ನೇ ಬಯಸುತ್ತಿರುತ್ತೀರಿ, ಅದರಲ್ಲಿ ನೋವು ಇರುವುದಿಲ್ಲ.

ನೀವು ಯಾರನ್ನೋ ಪ್ರೀತಿಸುತ್ತಿರುತ್ತೀರಿ ಅವರು ನಿಮ್ಮನ್ನು ನೋಡಿ ನಗಲಿಲ್ಲ, ಇಷ್ಟೇ ಸಾಕು! ನೀವು ಯಾರನ್ನೋ ಪ್ರೀತಿಸುತ್ತಿರುತ್ತೀರಿ ಆದರೆ ಅವರು ಬೇರೆ ಯಾರನ್ನೋ ಪ್ರೀತಿ ಮಾಡುತ್ತಿರುತ್ತಾರೆ ಅಥವಾ ಮಾತನಾಡುತ್ತಿರುತ್ತಾರೆ, ನೀವು ಇನ್ನು ಮುಂದಿನ 24 ಗಂಟೆಗಳು ಉರಿಯುತ್ತಿರುತ್ತೀರಿ. ಅಸೂಯೆ, ದ್ವೇಷ, ದುರಾಸೆ, ದುರಹಂಕಾರ ಮತ್ತು ಮೋಹ, ಇವುಗಳೆಲ್ಲಾ ಪ್ರೀತಿಯ ವಿರೂಪಗಳು.

ಶುದ್ಧವಾದ ಪ್ರೀತಿಯಲ್ಲಿ ಯಾವುದೇ ದುಃಖವಿಲ್ಲ. ಅದರಿಂದ ಜ್ಞಾನ ಮತ್ತು ಕೇಂದ್ರದಲ್ಲಿರುವುದು ತುಂಬಾ ಅವಶ್ಯಕ. ನೀವು ಕೇಂದ್ರೀಕೃತರಾಗಿದ್ದರೆ ಈ ಎಲ್ಲಾ ವಿರೂಪಗಳನ್ನು ನಿಭಾಯಿಸಬಹುದು. ಅವೆಲ್ಲ ಕೆಲವು ಕ್ಷಣಗಳವೆರೆಗೆ ಇದ್ದು ಮಾಯವಾಗುತ್ತವೆ. ಏನಾದರೂ ಆಗಲಿ, ನಾವು ನಿಭಾಯಿಸುತ್ತೇವೆ! ಜನರನ್ನು ಕೆಳಬೀಳದಂತೆ ನಾವು ಸುಲಭವಾಗಿ ನಿರ್ವಹಿಸಬಹುದು! ಎನ್ನುವ ಸ್ಥಿರತೆ ಬರುತ್ತದೆ.


ವೀಡಿಯೊ:





ಸಾಮಾಜಿಕ ಜಾಲತಾಣಗಳಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಇಂಸ್ಟಾಗ್ರಾಮ್: https://www.instagram.com/srisriravishankar

ಯೂಟೂಬ್: https://www.youtube.com/SriSri

ಟ್ವಿಟ್ಟೆರ್: http://twitter.com/SriSri

ಫೇಸ್ಬುಕ್: http://facebook.com/SriSriRaviShankar

ಬ್ಲಾಗ್: http://wisdom.srisriravishankar.org/

ಲಿಂಕ್ಡ್ ಇನ್: https://in.linkedin.com/in/srisriravishankar



ಕಾಮೆಂಟ್‌ಗಳು