ಗಣೇಶ ಚತುರ್ಥಿಯ ದಿನದಂದು ಗಣೇಶ ಭೂಮಿಯ ಮೇಲಿನ ತನ್ನ ಭಕ್ತರಿಗೆಲ್ಲಾ ಆಶೀರ್ವಾದ ನೀಡುತ್ತಾನೆ ಎಂಬ ನಂಬಿಕೆ ಇದೆ. ಶಿವ ಮತ್ತು ಪಾರ್ವತಿಯ ಮಗನಾದ ಗಣೇಶನು ಆನೆಯ ತಲೆಯನ್ನು ಹೊಂದಿರುತ್ತಾನೆ. ಅವನನ್ನು ಬುದ್ಧಿ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸುವ ಸರ್ವೋಚ್ಛ ದೇವರೆಂದು ಪೂಜಿಸುತ್ತಾರೆ. ಇದನ್ನು ಗಣೇಶನ ಜನ್ಮದಿನವೆಂದು ಆಚರಿಸುತ್ತಿದ್ದರೂ, ಹಬ್ಬದ ಹಿಂದಿನ ರಹಸ್ಯವು ತುಂಬಾ ಆಳವಾಗಿದೆ.
ಗಣೇಶನನ್ನು ‘’ಅಜಮ್ ನಿರ್ವಿಕಲ್ಪಂ ನಿರಕಾರಮೇಕಂ’’ ಎಂದು ಬಣ್ಣಿಸಲಾಗಿದೆ. ಇದರ ಅರ್ಥ ಗಣೇಶ ಜನ್ಮರಹಿತನು ಎಂದು. ಅವನು ಅಜಮ್ (ಜನ್ಮರಹಿತನು), ಅವನು ನಿರಾಕಾರ (ಆಕಾರ ಇಲ್ಲದವನು) ಮತ್ತು ಅವನು ನಿರ್ವಿಕಲ್ಪ (ಗುಣಲಕ್ಷಣವಿಲ್ಲದವನು). ಗಣೇಶ ತತ್ವ ಆತ್ಮ ಸ್ವರೂಪವಾದ ಸರ್ವವ್ಯಾಪಿ ಪ್ರಜ್ಞೆಯನ್ನು ಸಂಕೇತಿಸುತ್ತದೆ. ಯಾವ ಶಕ್ತಿಯಿಂದ ಈ ಸೃಷ್ಟಿಯೆಲ್ಲ ಬಂದಿದೆಯೋ, ಯಾವ ಶಕ್ತಿಯಲ್ಲಿ ಎಲ್ಲವೂ ಲಯವಾಗುವುದೋ ಅದೇ ಗಣೇಶ ತತ್ವವಾಗಿದೆ. ಗಣೇಶ ಎಲ್ಲೋ ನಮ್ಮಿಂದ ದೂರ ಕುಳಿತಿಲ್ಲ, ಅವನು ನಮ್ಮೊಳಗೇ ಇದ್ದಾನೆ. ಆದರೆ ಇದು ಬಹಳ ಸೂಕ್ಷ್ಮ ಜ್ಞಾನ. ನಿರಾಕಾರ ತತ್ವವನ್ನು ಎಲ್ಲರೂ ಗ್ರಹಿಸಲು ಸಾಧ್ಯವಿಲ್ಲ. ನಮ್ಮ ಪ್ರಾಚೀನ ಋಷಿ-ಮುನಿಗಳು ಇದನ್ನು ತಿಳಿದಿದ್ದರು; ಆದ್ದರಿಂದ ಅವರು ಎಲ್ಲಾ ಹಂತದ ಜನರ ತಿಳುವಳಿಕೆಗಾಗಿ ಮೂರ್ತಿರೂಪವನ್ನು ರಚಿಸಿದ್ದಾರೆ. ನಿರಾಕಾರವನ್ನು ಅನುಭವಿಸಲು ಸಾಧ್ಯವಾಗದವರು, ಮೂರ್ತಿಪೂಜೆಯ ರೂಪದಲ್ಲಿ ನಿರಂತರ ಅನುಭವ ಪಡೆದು ಕಾಲಕ್ರಮೇಣ ನಿರಾಕಾರ ಬ್ರಹ್ಮನನ್ನು ಗ್ರಹಿಸುತ್ತಾರೆ.
ಆದ್ದರಿಂದ, ರೂಪವು ಪ್ರಾರಂಭದ ಹಂತದಲ್ಲಿ ಉಪಯೋಗವಾಗುತ್ತದೆ. ಕಾಲಕ್ರಮೇಣ ನಿರಾಕಾರ ಪ್ರಜ್ಞೆಯು ಪ್ರಕಟಗೊಳ್ಳಲು ಪ್ರಾರಂಭಿಸುತ್ತದೆ. ಗಣೇಶನ ಮೂರ್ತಿರೂಪವನ್ನು ಮತ್ತೆ ಮತ್ತೆ ಪೂಜಿಸುವ ಮೂಲಕ ನಿರಾಕಾರ ಪರಮಾತ್ಮ ತತ್ವವನ್ನು ತಲುಪಲು ಗಣೇಶ ಚತುರ್ಥಿ ಸೂಚಿಸುತ್ತದೆ. ನಾವು ಗಣೇಶನನ್ನು ಪೂಜಿಸುವಾಗ ನಮ್ಮ ಅಂತರಂಗದಿಂದ ಹೊರಗೆ ಬಂದು ವಿಗ್ರಹದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳುವಂತೆ ಗಣೇಶನನ್ನು ಪ್ರಾರ್ಥಿಸುತ್ತೇವೆ. ಪೂಜೆಯ ನಂತರ ಮತ್ತೆ ನಮ್ಮ ಹೃದಯಕ್ಕೆ ಮರಳಿ ಹೋಗಲು ಪ್ರಾರ್ಥಿಸುತ್ತೇವೆ. ನಾವು ಗಣೇಶನನ್ನು ವಿಗ್ರಹ ರೂಪದಲ್ಲಿ ಪೂಜೆ ಮಾಡುವಾಗ, ನಮಗೆ ದೇವರು ಕೊಟ್ಟಿರುವುದನ್ನೆಲ್ಲಾ ಅವನಿಗೇ ಅರ್ಪಿಸುತ್ತೇವೆ.
ಕೆಲವು ದಿನಗಳ ಪೂಜೆಯ ನಂತರ ವಿಗ್ರಹವನ್ನು ನೀರಲ್ಲಿ ವಿಸರ್ಜನೆ ಮಾಡುವುದು, ದೇವರು ಬರೀ ವಿಗ್ರಹದಲ್ಲಿಲ್ಲ, ಅವನು ನಮ್ಮೊಳಗಿದ್ದಾನೆ ಎಂಬ ತಿಳುವಳಿಕೆಯನ್ನು ಬಲಪಡಿಸುತ್ತದೆ. ಆದ್ದರಿಂದ ಅವನ ಸರ್ವವ್ಯಾಪಿ ಗುಣವನ್ನು ಅರಿತುಕೊಂಡು, ಅವನನ್ನು ರೂಪದಲ್ಲೂ ಕೂಡ ಆಚರಿಸುವುದು ಗಣೇಶ ಚತುರ್ಥಿ ಹಬ್ಬದ ಮೂಲತತ್ವವಾಗಿದೆ. ಆದ್ದರಿಂದ, ವಿಗ್ರಹವನ್ನು ಸ್ಥಾಪಿಸಿ, ಅದನ್ನು ಬಹಳ ಆದರತೆ ಮತ್ತು ಪ್ರೀತಿಯಿಂದ ಪೂಜಿಸಿ, ಧ್ಯಾನ ಮಾಡಿ, ಗಣೇಶನನ್ನು ಅಂತರಂಗದಿಂದ ಅನುಭವಿಸಬೇಕು. ಗಣೇಶ ಚತುರ್ಥಿ ಹಬ್ಬದ ಮುಖ್ಯ ಉದ್ದೇಶ ನಮ್ಮೊಳಗೆ ಅಡಗಿರುವ ಗಣೇಶ ತತ್ವವನ್ನು ಜಾಗೃತಗೊಳಿಸುವುದು.
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar

ಕಾಮೆಂಟ್‌ಗಳು