ಖಂಡಿತವಾಗಿ, ನಾವು ಅದಕ್ಕೆ ಏನಾದರು ಮಾಡಬಹುದು. ನಿಮಗೆ ಗೊತ್ತಾ, ಮುಂದಿನ 5 ವರ್ಷಗಳಲ್ಲಿ ಖಿನ್ನತೆಯು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯು.ಎಚ್.ಒ) ಅಥವಾ ಬಹುಶಃ ಜಗತ್ತಿಗೇ ದೊಡ್ಡ ಸವಾಲಾಗಲಿದೆ.
ಯುರೋಪಿನ ಶಾಲಾ ಶಿಕ್ಷಕರಲ್ಲಿ ಸುಮಾರು 40% ಜನರು ಖಿನ್ನತೆಗೆ ಒಳಗಾಗಿದ್ದಾರೆ. ಶಿಕ್ಷಕರೇ ಖಿನ್ನತೆಗೆ ಒಳಗಾದರೆ ಮಕ್ಕಳಿಗೆ ಅವರು ಏನನ್ನು ಹೇಳಿಕೊಡುತ್ತಾರೆ? ಇದು ಹೀನ ಸ್ಥಿತಿ ಅಲ್ಲವೇ; ಅವರು ತಮ್ಮಲ್ಲಿರುವದನ್ನೇ ಮಕ್ಕಳಿಗೂ ರವಾನಿಸುತ್ತಾರೆ! ನಾವು ವಿದ್ಯಾರ್ಥಿಗಳಾಗಿದ್ದಾಗ ನಮ್ಮ ಶಿಕ್ಷಕರು ತುಂಬಾ ಉತ್ಸಾಹಭರಿತರಾಗಿರುತ್ತಿದ್ದರು; ಅವರು ಮಕ್ಕಳಿಗೆ ಉತ್ಸಾಹವನ್ನು ಹೆಚ್ಚಿಸುತ್ತಿದ್ದರು. ಅವರು ನಮಗೆ ಒಳ್ಳೆಯ ಆಲೋಚನೆಗಳು, ಆದರ್ಶಗಳು ಹಾಗು ಹೆಚ್ಚಿನ ಮೌಲ್ಯಗಳನ್ನು ನೀಡುತ್ತಿದ್ದರು ಮತ್ತು ನಮ್ಮ ನಮ್ಮ ಕ್ಷೇತ್ರದಲ್ಲಿ ಹೇಗೆ ಮುಂದುವರಿಯಬೇಕು ಎಂದು ಅವರು ನಮಗೆ ಮಾರ್ಗದರ್ಶನ ನೀಡುತ್ತಿದ್ದರು.
ಮಕ್ಕಳಿಗೆ ಮಾರ್ಗದರ್ಶಕ ನೀಡಿ ಸಮಾಜಕ್ಕೆ ಬೆಳಕಾಗಬೇಕಾದ ಶಿಕ್ಷಕರೇ ಖಿನ್ನತೆಗೆ ಒಳಗಾಗುವುದನ್ನು ಇಂದು ನಾವು ಕಾಣುತ್ತಿರುವುದು ಬಹಳ ಶೋಚನೀಯ. ಶೇಖಡಾ ಅರ್ಧದಷ್ಟು ಜನಸಂಖ್ಯೆಯನ್ನು ನಾವು ನಕಾರಾತ್ಮಕತೆಯಿಂದ ಪೋಷಿಸಲು ಸಾಧ್ಯವಿಲ್ಲ. ಸ್ವಲ್ಪ ಸಮಯದ ನಂತರ ಅದೂ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ನೀವು ಅವರಿಗೆ ಜೀವನ ಕೌಶಲ್ಯಗಳು, ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು ಮತ್ತು ನಕಾರಾತ್ಮಕ ಭಾವನೆಗಳನ್ನು ನಿಭಾಯಿಸುವ ಕೌಶಲ್ಯಗಳನ್ನು ಕಲಿಸಲು ಇದೇ ಸೂಕ್ತ ಸಮಯ. ರಹಸ್ಯವು ಅವರ ಮೂಗಿನ ಕೆಳಗೇ ಅಡಗಿದೆ! ತಮ್ಮದೇ ಉಸಿರಾಟದ ಸಹಾಯದಿಂದ ಅವರು ಮನಸ್ಸನ್ನು ಶಾಂತಗೊಳಿಸಬಹುದು ಮತ್ತು ಭಾವನೆಗಳನ್ನು ನಿಯಂತ್ರಿಸಬಹುದು.
ನೀವು ನಿಮ್ಮ ಭಾವನೆಗಳ ಬಲಿಪಶುವಾಗುವ ಬದಲು ಅವುಗಳ ನಿಯಂತ್ರಕರಾಗಬಹುದು;ಕೇವಲ ಒಂದು ತಿಳುವಳಿಕೆಯಷ್ಟೇ ಸಾಕು.
ಯೋಗವೂ ಒಂದು ಮಾರ್ಗ. ಸಹಜವಾಗಿ, ಅನೇಕರು ಕೇವಲ ದೈಹಿಕ ವ್ಯಾಯಾಮಗಳನ್ನು ಯೋಗ ಎಂದುಕೊಳ್ಳುತ್ತಾರೆ. ಭುಜಂಗಾಸನ ಅಥವಾ ಶಿರಸಾಸನ ಹೀಗೆ, ಆದರೆ ಅದೇ ಯೋಗ ಅಲ್ಲ! ಯೋಗವು ಉಸಿರಾಟದ ಲಯಬದ್ಧತೆ, ದೇಹದಲ್ಲಿನ ಸಂವೇದನೆ ಮತ್ತು ನಿಮ್ಮ ಬಗ್ಗೆ ನಿಮಗಿರುವ ಅರಿವು. ಇದೆಲ್ಲವೂ ಯೋಗ, ಧ್ಯಾನ, ಕೌಶಲ್ಯತೆ ಮತ್ತು ಉತ್ತಮ ಜೀವನ ನಿರ್ವಹಣೆಯ ಕಾರ್ಯಕ್ರಮಗಳ ವ್ಯಾಪ್ತಿಗೆ ಬರುತ್ತದೆ ಮತ್ತು ಇದು ಜನರಿಗೆ ಬಹಳ ಸಹಾಯ ಮಾಡುತ್ತದೆ. ಕೆಲವು ಶತಮಾನಗಳ ಹಿಂದೆ ಎಲ್ಲರೂ ಧಂತಮಂಜನ (ಟೂತ್‌ಪೇಸ್ಟ್) ಬಳಸುತ್ತಿರಲಿಲ್ಲ. ಹಲ್ಲುಗಳ ಸ್ವಾಸ್ಥ್ಯಕ್ಕೆ ಅಷ್ಟು ಪ್ರಾಮುಖ್ಯತೆ ಇರಲಿಲ್ಲ.
ಆದರೆ ಇಂದು ಪ್ರತಿಯೊಬ್ಬರೂ ಬೆಳಿಗ್ಗೆ ಎದ್ದ ಕೂಡಲೇ ಹಲ್ಲುಜ್ಜುತ್ತಾರೆ ಮತ್ತು ರಾತ್ರಿ ಹಲ್ಲುಜ್ಜಿ ಮಲಗುತ್ತಾರೆ.
ಅದೇ ರೀತಿ, ಮಾನಸಿಕ ಸ್ವಾಸ್ಥ್ಯ ಕೂಡ ಅತ್ಯಗತ್ಯ ಎಂದು ನಾವು ಹೇಳುತ್ತೇವೆ. ವರ್ತಮಾನದಲ್ಲಿ ಜೀವಿಸುವುದನ್ನು ಕಲಿತು, ನಿಮ್ಮ ಮನಸ್ಸನ್ನು ಶುಚಿಗೊಳಿಸಿ ಮತ್ತು ಎಲ್ಲಾ ಹಿಂದಿನ ಸಂಸ್ಕಾರಗಳಿಂದ ಹೊರಬಂದು, ಕೋಪ, ಅಸೂಯೆ, ದುರಾಸೆಗಳನ್ನು ದೂರವಾಗಿಸಿ ಜೀವನವನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕು.
ಹಿಂದಿನದೆಲ್ಲಾ ಒಮ್ಮೆ ತಿರುಗಿ ನೋಡಿ, ಎಲ್ಲಾ ಘಟನೆಗಳು - ಹಿತಕರ ಮತ್ತು ಅಹಿತಕರ, ಎಲ್ಲವೂ ಕಳೆದುಹೋಗಿವೆ; ನಮ್ಮ ಮೆದುಳಿನಲ್ಲಿ ಕೆಲವು ನೆನಪುಗಳ ಮಾತ್ರ ಉಳಿದಿವೆ, ಅಷ್ಟೆ. ಯುವಕರು ಜಾಗೃತ ಮನಸ್ಸನ್ನು ಹೊಂದಿದ್ದರೆ ಅಥವಾ ಮನಸ್ಸು ಎಚ್ಚರದಿಂದ ಇದ್ದರೆ, ಅದು ಬಹಳಷ್ಟು ವ್ಯತ್ಯಾಸವನ್ನುಂಟು ಮಾಡುತ್ತದೆ.
ವೀಡಿಯೊ :

ಕಾಮೆಂಟ್‌ಗಳು