ಪ್ರಶ್ನೆ 1. ಪಿತೃ ದೋಷ ಎಂದರೇನು? ಇದು ನಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅದನ್ನು ನಾವು ಹೇಗೆ ಸರಿಪಡಿಸಬಹುದು?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಪೋಷಕರನ್ನು ಅಥವಾ ಪೂರ್ವಜರನ್ನು ನೋಯಿಸುವುದರಿಂದ ಪಿತೃ ದೋಷವಾಗುತ್ತದೆ. ಮಕ್ಕಳು ಹೆತ್ತವರನ್ನು ಹಿಂಸಿಸಿದರೆ ಮತ್ತು ಅವರನ್ನು ಅರ್ಥಮಾಡಿಕೊಳ್ಳದಿದ್ದರೆ ಅದನ್ನು ಪಿತೃ ದೋಷ ಎಂದು ಕರೆಯಲಾಗುತ್ತದೆ. ಹೆತ್ತವರು ನಿಮ್ಮನ್ನು ತುಂಬಾ ಪ್ರೀತಿಯಿಂದ ಬೆಳೆಸಿರುತ್ತಾರೆ, ತಾವು ನೊಂದರೂ ಸಹ ನಿಮಗೆ ಉತ್ತಮ ಜೀವನವನ್ನು ನೀಡಿರುತ್ತಾರೆ, ಸದಾ ನಿಮ್ಮ ಪಕ್ಕದಲ್ಲಿದ್ದು ನಿಮಗೆ ಬೆಳೆಯಲು ಸಹಾಯ ಮಾಡಿರುತ್ತಾರೆ. ಆದರೆ ನಂತರ ನೀವು ಅವರಿಗೆ ಪ್ರೀತಿಯನ್ನು ನೀಡದೇ ಅವರಿಗೆ ನೋವು ಉಂಟುಮಾಡಿದರೆ ಇದನ್ನೆ ಪಿತೃ ದೋಷ ಎನ್ನಲಾಗುತ್ತದೆ.

ಆದರೆ ನಾವು ಹೇಳುವುದೇನೆಂದರೆ, ಧ್ಯಾನ ಮಾಡುವುದು, ಆಧ್ಯಾತ್ಮಿಕ ಹಾದಿಯಲ್ಲಿ ಸಾಗುವುದು, ಶುದ್ಧ ಹೃದಯವನ್ನು ಇಟ್ಟುಕೊಳ್ಳುವುದು ಮತ್ತು ನಿಸ್ವಾರ್ಥ ಸೇವೆ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ನಿಮ್ಮ ಜೀವನದಲ್ಲಿ ಈ ದೋಷ ನಿವಾರಣೆಯಾಗುತ್ತದೆ. ನಾವು ತಿಳಿದುಕೊಳ್ಳಬೇಕಾದ ಇನ್ನೊಂದು ವಿಷಯವೇನೆಂದರೆ ಕೆಲವೊಮ್ಮೆ ನೀವು ಏನೂ ಮಾಡಿಲ್ಲದಿದ್ದರೂ ಜನರು ಅವರದೇ ಆದ ಅಜ್ಞಾನದಿಂದಲೂ ಸಹ ಶೋಚನೀಯರಾಗಿರುತ್ತಾರೆ. ನಿಮಗೆ ಮಾಡಲು ಸಾಧ್ಯವಾಗದೆ ಇರುವಂತಹ ಕೆಲಸವನ್ನು ಅವರು ನಿಮ್ಮಿಂದ ನಿರೀಕ್ಷಿಸಿ ದುಃಖಿತರಾಗಿರುತ್ತಾರೆ, ಆಗ ನಿಮಗೆ ಪಿತೃ ದೋಷ ತಗುಲುವುದಿಲ್ಲ. ನಿಮ್ಮಿಂದ ಸಾಧ್ಯವಾದದ್ದನ್ನು ನೀವು ಮಾಡದೆ ಇದ್ದು ಅದರಿಂದ ಅವರಿಗೆ ನೋವಾದಾಗ ಮಾತ್ರ ದೋಷ ಸಂಭವಿಸುತ್ತದೆ. ನಿಮ್ಮ ಸ್ವಾರ್ಥ ಕಾರಣಗಳಿಂದ ಉದ್ದೇಶಪೂರ್ವಕವಾಗಿ ಪೋಷಕರಿಗೆ ನೋವುಂಟುಮಾಡಿದಾಗ ನಿಮಗೆ ಪಿತೃದೋಷ ಸಂಭವಿಸುತ್ತದೆ.

ನಂತರ ಏನಾಗುತ್ತದೆ? ಇಡೀ ಪೀಳಿಗೆಗೆ ಪಿತೃದೋಷಸಮಸ್ಯೆಗಳು ಕಾಡುವ ಸಂಭವವಿರುತ್ತದೆ. ನಿಮ್ಮ ಮಕ್ಕಳು ನಿಮಗೆ ಸಮಸ್ಯೆಯನ್ನು ನೀಡುತ್ತಾರೆ. ದೋಷಪರಿಣಾಮವಾಗಿ ಮಕ್ಕಳು ಕೆಲವು ವಿಶೇಷ ನ್ಯೂನತೆಗಳೊಂದಿಗೆ ಜನಿಸುತ್ತಾರೆ ಅಥವಾ ಕೆಲವು ವಿರೂಪಗಳು ಇರಬಹುದು. ಇದು ಪಿತೃ ದೋಷದ ಚಿಹ್ನೆ. ಪೂರ್ವಜರ ಸಾಲಿನಲ್ಲಿ ಎಲ್ಲೋ ಪೋಷಕರು ತಮ್ಮ ಮಕ್ಕಳ ಬಗ್ಗೆ ತುಂಬಾ ಅಸಮಾಧಾನ ಹೊಂದಿದ್ದರೆ ನೀವು ನಿಮ್ಮ ಸ್ವಂತ ಮಕ್ಕಳೊಂದಿಗೆ ಅತೃಪ್ತರಾಗಿರಬೇಕಾಗಬಹುದು. ಇದು ಕರ್ಮದ ನಿಯಮ. ಆದರೆ ಅದಕ್ಕೆ ಪರಿಹಾರವಿದೆ, ಅದುವೇ ಧ್ಯಾನ ಮತ್ತು 'ಓಂ ನಮಃ ಶಿವಾಯ' ಮಂತ್ರ ಜಪ. ಇದಕ್ಕಾಗಿಯೇ 'ಓಂ ನಮಃ ಶಿವಾಯ' ಮಂತ್ರವನ್ನು ಮಹಾ ಮಂತ್ರ ಎಂದು ಕರೆಯಲಾಗುತ್ತದೆ. ಇದು ಯಾವುದೇ ದೋಶಗಳನ್ನು ಸರಿಪಡಿಸಬಹುದು. ಇದು ಕೇವಲ ಒಂದು ಧರ್ಮಕ್ಕೆ ಸೇರಿಲ್ಲ, ಇದು ಸಾರ್ವತ್ರಿಕವಾಗಿದೆ ಮತ್ತು ಎಲ್ಲರೂ ಇದರ ಉಪಯೋಗವನ್ನು ಪಡೆಯಬಹುದು.


    
ವೀಡಿಯೊ:




ಕಾಮೆಂಟ್‌ಗಳು